ಕ್ರಿಲಾಫ್, ಇವ್ಯಾನ್ ಆಂದ್ರೆವಿಚ್ 
	1768-1844. ರಷ್ಯನ್ ಕತೆಗಾರ, ನಾಟಕಕಾರ, ಒಂಬತ್ತು ಸಂಪುಟಗಳಲ್ಲಿ ಅಡಕವಾಗಿರುವ ಇವನ ನೀತಿ ಕಥೆಗಳು ಬಹು ಜನಪ್ರಿಯವಾದುವು. ಇವುಗಳಲ್ಲಿನ ಹಲವು ಮಾತುಗಳು ಇಂದಿಗೂ ಗಾದೆಗಳಾಗಿವೆ. ಅಸಾಮಥ್ರ್ಯ, ಮೂರ್ಖತನಗಳನ್ನು ನಿರ್ದಯವಾಗಿ ಈತ ಹಾಸ್ಯ ಮಾಡುತ್ತಾನೆ. ಆದರೆ ಇವನ ವಿಡಂಬನೆಯಲ್ಲಿ ರೋಷವಿಲ್ಲ. ಮುಗಿಲು ಮುಟ್ಟುವ ಆದರ್ಶ, ಅತಿ ಆಶಾವಾದಿತ್ವ, ಆವೇಶಗಳನ್ನು ಕಡೆಗಣಿಸಿ, ಯುಕ್ತಾಯುಕ್ತ ವಿವೇಚನೆ, ವ್ಯವಹಾರ ಜ್ಞಾನಗಳನ್ನಿವನು ಮೆಚ್ಚುತ್ತಾನೆ. ಭಾಷೆಯ ಮೇಲಿನ ಇವನ ಪ್ರಭುತ್ವ ಅಸಾಧಾರಣವಾದುದು. 					 (ಎಲ್.ಎಸ್.ಎಸ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ